ಬೆಂಗಳೂರು,ಜನವರಿ 18:ಜಿಲ್ಲಾ ಕೇಂದ್ರಗಳಲ್ಲಿ ಪತ್ರಕರ್ತರ ವಿವಿಧ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪತ್ರಿಕಾ ಭವನ ನಿರ್ಮಾಣಕ್ಕೆ ತಲಾ ೨೫ ಲಕ್ಷ ರೂ.ಗಳಂತೆ ಹಾಗೂ ಅಸ್ತಿತ್ವದಲ್ಲಿರುವ ಪತ್ರಿಕಾ ಭವನಗಳ ನವೀಕರಣಕ್ಕೆ ರೂ. ೧೨.೫ ಲಕ್ಷಗಳಂತೆ ಒಟ್ಟು ರೂ. ೩ ಕೋಟಿ ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಉತ್ತರ ಕನ್ನಡ, ತುಮಕೂರು ಬಾಗಲಕೋಟೆ, ಚಾಮರಾಜನಗರ, ಗದಗ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕಬಳ್ಳಾಪುರ, ಹಾಗೂ ಗುಲ್ಬರ್ಗ ಜಿಲ್ಲೆಗಳಿಗೆ ತಲಾ ರೂ. ೨೫ ಲಕ್ಷ ಹಾಗೂ ಹಾಸನ, ಕೋಲಾರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳ ಪತ್ರಿಕಾ ಭವನ ನವೀಕರಣಕ್ಕೆ ತಲಾ ರೂ. ೧೨.೫ ಲಕ್ಷ ಅನುದಾನ ವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.
ಈ ಪತ್ರಿಕಾ ಭವನಗಳ ನಿರ್ಮಾಣ, ದುರಸ್ತಿ, ಅಭಿವೃದ್ಧಿ, ನಿರ್ವಹಣೆ, ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಹಾಗೂ ಜಿಲ್ಲಾ ವಾರ್ತಾ ಇಲಾಖೆ ಉಪನಿರ್ದೇಶಕರು/ಸಹಾಯಕ ನಿರ್ದೇಶಕರನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿಗಳನ್ನೂ ಸರ್ಕಾರ ರಚಿಸಿದೆ.